ಮಣಿರತ್ನಂ ನಿರ್ದೇಶನದ ಬಹು ನಿರೀಕ್ಷಿತ ಹಾಗೂ ಬಹು ತಾರಾಗಣದ ಪೊನ್ನಿಯನ್ ಸೆಲ್ವನ್ ಸಿನಿಮಾ ಬಿಡುಗಡೆಗೆ ಇನ್ನೂ ಕೆಲವೇ ದಿನಗಳು ಮಾತ್ರವೇ ಭಾಕಿ ಇದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಸಾಕಷ್ಟು ಕಡೆಗಳಿಗೆ ತೆರೆಳಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ.ಅಂತೆಯೇ ನಿನ್ನೆ ಬೆಂಗಳೂರಿಗೆ ಆಗಮಿಸಿದ ಚಿತ್ರತಂಡ ಪ್ರಚಾರ ಕಾರ್ಯ ನಡೆಸಿದೆ. ಈ ವೇಳೆ ನಟ ಕಾರ್ತಿ ಬೆಂಗಳೂರು ಸಿಟಿ ಹಾಗೂ ಡಾ.ರಾಜ್ ಕುಮಾರ್ ಅವರ ಪೌರಾಣಿಕ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ.
ಬೆಂಗಳೂರು ಎಂದರೆ ಸಾಕಷ್ಟು ಕಲಾವಿದರಿಗೆ ಅಚ್ಚುಮೆಚ್ಚು. ಪರಭಾಷೆಯ ಮಂದಿಯೂ ಸಿಲಿಕಾನ್ ಸಿಟಿಗೆ ಮರುಳಾಗಿದ್ದಾರೆ. ಎಲ್ಲರಿಗೂ ನಮಸ್ಕಾರ. ನಿಮ್ಮನ್ನು ನೋಡಿ ನನಗೆ ತುಂಬಾ ಸಂತೋಷ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಕಾರ್ತಿ, ಬೆಂಗಳೂರಿಗೆ ಬರ್ತಿದ್ದಂತೆ ನನಗೆ ನನ್ನ ಕಾಲೇಜು ದಿನಗಳು ನೆನಪಾಯ್ತಿ. ಆಗ ನಮಗೆ ಬೆಂಗಳೂರು ಸಿಟಿ ನ್ಯೂಯಾರ್ಕ್ ಸಿಟಿ ರೀತಿಯಲ್ಲಿ ಅನಿಸುತ್ತಿತ್ತು. ಇಂಗ್ಲೀಷ್ ಸಿನಿಮಾಗಳ್ಲಲಿ 6 ತಿಂಗಳು ಮೊದಲೇ ಇಲ್ಲಿ ರಿಲೀಸ್ ಆಗ್ತಿತ್ತು. ಇಲ್ಲಿ ತುಂಬಾ ಒಳ್ಳೋಳ್ಳೆ ಬಟ್ಟೆ ಸಿಗುತ್ತಿತ್ತು. ಶುಕ್ರವಾರ ಬಂತು ಅಂದರೆ ಕಂಬೈಂಡ್ ಸ್ಟಡಿ ಎಂದು ಸುಳ್ಳು ಹೇಳಿ ಕೊನೆ ಬಸ್ ಹಿಡಿದು ಬೆಂಗಳೂರಿಗೆ ಬರ್ತಿದ್ವಿ. ರೂಮ್ ತುಂಬಾ ದುಬಾರಿ ಇರ್ತಿದ್ದ ಕಾರಣಕ್ಕೆ ಬುಕ್ ಮಾಡ್ತಾ ಇರ್ಲಿಲ್ಲ. ಬೆಂಗಳೂರೆಲ್ಲಾ ಸುತ್ತಾಡಿ ಮತ್ತೆ ಬಸ್ ಹಿಡಿದು ಊರಿಗೆ ಹೋಗುತ್ತಿದ್ದೆವು. ಇಲ್ಲಿ ಶಾಪಿಂಗ್ ಮಾಡುತ್ತಿದ್ದೆವು ಎಂದು ಹಳೆಯ ನೆನಪುಗಳನ್ನು ಕಾರ್ತಿ ಮೆಲುಕು ಹಾಕಿದರು.

ಏನೇ ಬಂದರೂ ಮೊದಲು ಬೆಂಗಳೂರಿಗೆ ಬಂದು ನಂತರ ಚೆನ್ನೈಗೆ ಹೋಗುತ್ತಿತ್ತು. ಎಂಜಿ ರೋಡ್ ಸಖತ್ ಕಾಸ್ಟ್ಲಿ ಆದ ಕಾರಣ ಅಲ್ಲಿ ಬರೀ ವಿಂಡೋ ಶಾಪಿಂಗ್ ಮಾಡಿ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಶಾಪಿಂಗ್ ಮಾಡುತ್ತಿದ್ದೆವು. ಯಾಕೆಂದರೆ ಕಮರ್ಷಿಯಲ್ ಸ್ಟ್ರಿಟ್ ನಲ್ಲಿ ಎಲ್ಲಾ ವಸ್ತುಗಳು ತುಂಬಾ ಕಡಿಮೆ ರೇಟ್ ಗೆ ಸಿಗುತ್ತಿತ್ತು ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು.

ಸಿನಿಮಾ ರಂಗದ ಎಲ್ಲಾ ಇಂಡಸ್ಟ್ರಿಯಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ತೆರೆಗೆ ಬಂದು ಸದ್ದು ಮಾಡುತ್ತಿವೆ. ಬಾಹುಬಲಿ, ಆರ್ ಆರ್ ಆರ್, ಕೆಜಿಎಫ್ ಸಿನಿಮಾಗಳು ತೆರೆಕಂಡು ದೊಡ್ಡ ಹೆಸರು ಮಾಡಿವೆ. ಪ್ರಪಂಚವೆಲ್ಲಾ ನಮ್ಮ ಸಿನಿಮಾಗಳನ್ನು ನೋಡುತ್ತಿದ್ದು ಅದೇ ಸಾಲಿನಲ್ಲಿ ಇದೀಗ ಪೊನ್ನಿಯಲ್ ಸೆಲ್ವನ್ ಸಿನಿಮಾ ಸಿದ್ದವಾಗಿದೆ ಎಂದರು.