ಸಿನಿಮಾ ಹಣ ಪಡೆದುಕೊಳ್ಳುವುದು, ವಾಪಸ್ ಮಾಡುವುದು ಇದ್ದದ್ದೆ. ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಯುವ ಸಿನಿ ರಂಗದಲ್ಲಿ ಕೆಲವೊಮ್ಮೆ ಸಮಸ್ಯೆಗಳು ಎದುರಾಗುವುದು ಸಹಜ. ಇದೇ ಹಣದ ವ್ಯವಹಾರದಿಂದ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಲಿಂಗುಸ್ವಾಮಿ ಸಮಸ್ಯೆಗೆ ಸಿಲುಕಿದ್ದು ಇದೀಗ ಕಂಬಿ ಎಣಿಸುವಂತಾಗಿದೆ.

ಚೆಕ್ ಬೌನ್ಸ್ ಪ್ರಕರಣದಲ್ಲಿ ನಿರ್ದೇಶಕ ಲಿಂಗುಸ್ವಾಮಿ ಅಪರಾಧ ಮಾಡಿರುವುದು ಸಾಬೀತಾಗಿದ್ದು, 6 ತಿಂಗಳು ಜೈಲು ಶಿಕ್ಷೆ ವಿಧಿಸಿ ಮೆಟ್ರೋರಂಗದಲ್ಲಿ ಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ತೀರ್ಪು ಪ್ರಕಟಿಸಿದೆ. ಲಿಂಗುಸ್ವಾಮಿ ಜೊತೆಗೆ ಸಹೋದರ ಸುಭಾಷ್ ಚಂದ್ರ ಬೋಸ್ ಅವರಿಗೂ ಅದೇ ಶಿಕ್ಷೆ ಪ್ರಕಟಿಸಲಾಗಿದೆ. ಸದ್ಯ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಲಿಂಗುಸ್ವಾಮಿ ಮೇಲ್ಮನವಿ ಸಲ್ಲಿಸಲಿದ್ದಾರೆ.

ದಿ ವಾರಿಯರ್ ಖ್ಯಾತಿಯ ನಿರ್ದೇಶಕ ಲಿಂಗುಸ್ವಾಮಿ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅನೇಕ ಹಿಟ್ ಸಿನಿಮಾಗಳನ್ನು ನೀಡಿರುವ ಲಿಂಗುಸ್ವಾಮಿ ಸಹೋದರನ ಜೊತೆ ಸೇರಿಕೊಂಡು ತಿರುಪತಿ ಬ್ರದರ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಇದರ ಮೂಲಕ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಲಿಂಗುಸ್ವಾಮಿ ನಿರ್ದೇಶನ ಮಾಡಿರುವ ‘ಆನಂದಂ’, ‘ರನ್’, ‘ಸಂಡಕೋಳಿ’, ‘ಭೀಮ’, ‘ಪೈಯಾ’ ಮುಂತಾದ ಸಿನಿಮಾಗಳು ಸೂಪರ್ ಹಿಟ್ ಆಗಿವೆ.
‘ಎನ್ನಿ ಏಳು ನಾಲ್’ ಸಿನಿಮಾ ಸಲುವಾಗಿ ಲಿಂಗುಸ್ವಾಮಿ ಮತ್ತು ಸುಭಾಷ್ ಚಂದ್ರ ಬೋಸ್ ಅವರು ಪಿವಿಪಿ ಎಂಬ ಕಂಪನಿಯಿಂದ 1.03 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಸಾಲ ವಾಪಸ್ ನೀಡುವಾಗ 35 ಲಕ್ಷ ರೂಪಾಯಿ ಚೆಕ್ ನೀಡಿದ್ದರು. ಆದರೆ ಅವರ ಬ್ಯಾಂಕ್ ಖಾತೆಯಲ್ಲಿ ಅಗತ್ಯ ಹಣ ಇಲ್ಲದ ಕಾರಣ ಚೆಕ್ ಬೌನ್ಸ್ ಆಗಿದೆ. ಈ ಸಂಬಂಧ ಪಿವಿಪಿ ಕಂಪನಿಯವರು ಕೋರ್ಟ್ ಮೆಟ್ಟಲು ಏರಿದರು. ಈ ಪ್ರಕರಣದ ತೀರ್ಪು ಬಂದಿದ್ದು, ಲಿಂಗುಸ್ವಾಮಿ ಮತ್ತು ಅವರ ಸಹೋದರನಿಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.