ಕಿಚ್ಚ ಸುದೀಪ್ ನಟನೆಯ ಮಾಣಿಕ್ಯ ಸಿನಿಮಾದ ಮೂಲಕ ಕನ್ನಡಿಗರ ಮನ ಗೆದಿದ್ದ ನಟಿ ವರಲಕ್ಷ್ಮೀ ಶರತ್ ಕುಮಾರ್ ಅವರಿಗೆ ಕೋವಿಡ್ ದೃಢಪಟ್ಟಿದೆ. ಈ ಬಗ್ಗೆ ಸ್ವತಃ ನಟಿ ವರಲಕ್ಷ್ಮೀ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕೋವಿಡ್ ದೃಡಪಟ್ಟಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಟಿ, ಮಾಸ್ಕ್ ಧರಿಸಿ, ಕೋವಿಡ್ ಲಕ್ಷಣಗಳಿದ್ದರೆ ವೈದ್ಯರನ್ನ ಕೂಡಲೇ ಸಂಪರ್ಕಿಸಿ, ಜೊತೆಗೆ ಇತ್ತೀಚೆಗೆ ನನ್ನನ್ನು ಭೇಟಿಯಾದವರು ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಸದ್ಯ ಜ್ವರ ಹಾಗೂ ಮೈ ಕೈ ನೋವಿನಿಂದ ಬಳಲುತ್ತಿರುವ ನಟಿ ವೈದ್ಯರ ಸೂಚನೆಯ ಮೇರೆಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಮಿಳು ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ನಟಿ ವರಲಕ್ಷ್ಮೀ ಬಳಿಕ ಕನ್ನಡ, ಮಲಯಾಳಂ, ತೆಲುಗು ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ದಕ್ಷಿಣ ಭಾರತದ ಮುಂಚೂಣಿ ನಟಿಯಾಗಿ ಗುರುತಿಸಿಕೊಂಡಿರುವ ವರಲಕ್ಷ್ಮೀ ಏಳೇಣು ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ನಟಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿರೋದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.