ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮರಳುತ್ತಿದೆ ಭವ್ಯ ಪರಂಪರೆ – ʻಸೂರ್ಯವಂಶʼ ಮಾರ್ಚ್ 11 ರಿಂದ ಸೋಮವಾರ-ಶನಿವಾರ ರಾತ್ರಿ 8 ಗಂಟೆಗೆ
ಬಹುನಿರೀಕ್ಷಿತ ಹೊಸ ಧಾರಾವಾಹಿ ʼಸೂರ್ಯವಂಶʼ ಈ ಸಾಲಿಗೆ ವಿಶಿಷ್ಟ ಸೇರ್ಪಡೆ. ಒಂದು ಹಳೆಯ ಭವ್ಯ ಪರಂಪರೆಯ ಹೆಗ್ಗುರುತಾಗಿ ನಿಂತಿರುವ ʼಸೂರ್ಯವಂಶʼ ಕುಟುಂಬದಲ್ಲಿ ತಾತ ಸತ್ಯಮೂರ್ತಿಗೆ ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ವಂಶದ ಕುಡಿಯದೇ ಚಿಂತೆ. ಯಾಕೆಂದರೆ ಇಪ್ಪತ್ತು ವರ್ಷಗಳ ಹಿಂದೆ ಮೊಮ್ಮಗ ಸೂರ್ಯವರ್ಧನ ಕಾಣೆಯಾಗಿದ್ದಾನೆ. ಆದರೆ ಆತ ಬರುವ ಸಾಧ್ಯತೆ ಇಲ್ಲ ಎನ್ನುವುದು ಕುಟುಂಬದ ಉಳಿದ ಸದಸ್ಯರ ನಂಬಿಕೆ. ಬಂದೇ ಬರುತ್ತಾನೆ ಎಂದು ನಂಬಿರುವ ಸತ್ಯಮೂರ್ತಿಯ ಸಮಾಧಾನಕ್ಕೆ ಕುಟುಂಬದ ವಕೀಲರು ಒಬ್ಬ ಸೂಕ್ತ ವ್ಯಕ್ತಿಯ ತಲಾಶ್ ಮಾಡುತ್ತಾರೆ. ಒಂದು ಆಕಸ್ಮಿಕ ಸಂದರ್ಭದಲ್ಲಿ ಒಬ್ಬ ಆಕರ್ಷಕ ಹುಡುಗ ಸಿಕ್ಕೇಬಿಡುತ್ತಾನೆ. ತಾಯಿಯ ಚಿಕಿತ್ಸೆಗೆ ಹಣ ಬೇಕಿರುವ ಒಂದೇ ಕಾರಣಕ್ಕೆ ಆತ ಈ ನಾಟಕಕ್ಕೆ ಒಪ್ಪಿಕೊಳ್ಳುತ್ತಾನೆ. ಅವನೇ ಕಥಾನಾಯಕ ಕರ್ಣ.
ಕರ್ಣ ʼಸೂರ್ಯವಂಶʼಕ್ಕೆ ಕಾಲಿಟ್ಟ ನಂತರ ಮುಂದಿನ ದಾರಿ ಸವಾಲುಗಳಿಂದ ತುಂಬಿರುತ್ತದೆ. ಮನೆಯೊಳಗೂ ಹೊರಗೂ ವಿರೋಧಿಗಳಿದ್ದಾರೆ. ಅದೇ ಊರಿನಲ್ಲಿ ಸೂರ್ಯವಂಶದ ಬದ್ಧಶತ್ರು ಕಾಳಿಂಗನ ಕುಟುಂಬವಿದೆ. ಅವನ ಆಟಾಟೋಪ ಮಿತಿಮೀರಿರುತ್ತದೆ. ಅವನನ್ನು ಬಗ್ಗುಬಡಿಯುವುದು ಕರ್ಣನಿಂದ ಮಾತ್ರ ಸಾಧ್ಯ ಅಂತ ಊರ ಜನ ನಂಬಿದ್ದಾರೆ. ಈ ನಡುವೆ ಕಥಾನಾಯಕಿ ಸುರಭಿಯ ಆಗಮನವಾಗುತ್ತದೆ. ಕತೆ ಹೊಸ ತಿರುವು ಪಡೆದುಕೊಳ್ಳುತ್ತದೆ. ಎಲ್ಲ ಸವಾಲುಗಳನ್ನು ಸೂರ್ಯನಾಗಿ ನಟಿಸುತ್ತ ಕರ್ಣ ಹೇಗೆ ಎದುರಿಸುತ್ತಾನೆ ? ಕರ್ಣನೇ ʻಸೂರ್ಯವಂಶʼದ ಕುಡಿ ಸೂರ್ಯವರ್ಧನ ಎನ್ನುವ ವಿಷಯ ಹೇಗೆ, ಯಾರಿಂದ, ಯಾವಾಗ ಬಹಿರಂಗವಾಗುತ್ತದೆ ? ಇವೆಲ್ಲ ಮುಂದಿರುವ ರೋಚಕ ತಿರುವುಗಳು.
ಕಥಾನಾಯಕ ಸೂರ್ಯವರ್ಧನ/ಕರ್ಣನ ಪಾತ್ರದಲ್ಲಿ ಜನಪ್ರಿಯ ನಟ ಅನಿರುದ್ಧ್ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿ ಸುರಭಿ ಪಾತ್ರದಲ್ಲಿ ಅಶ್ವಿನಿ, ತಾತ ಸತ್ಯಮೂರ್ತಿ ಪಾತ್ರದಲ್ಲಿ ಸುಂದರರಾಜ್, ಖಳನಟ ಕಾಳಿಂಗನ ಪಾತ್ರದಲ್ಲಿ ದಿ.ಉದಯಕುಮಾರ್‌ರ ಪುತ್ರ ವಿಕ್ರಂ ಉದಯಕುಮಾರ್ ನಟಿಸುತ್ತಿದ್ದಾರೆ. ಉಳಿದಂತೆ ರವಿ ಭಟ್, ಸುಂದರಶ್ರೀ, ಲೋಕೇಶ್ ಬಸವಟ್ಟಿ, ಪುಷ್ಪಾ ಬೆಳವಾಡಿ, ನಯನಾ, ರಾಮಸ್ವಾಮಿ, ಸುನಂದಾ ಮುಂತಾದವರ ದೊಡ್ಡ ತಾರಾಗಣವಿದೆ.
ಹರಿಸಂತು ಪ್ರಧಾನ ನಿರ್ದೇಶನದ ʻಸೂರ್ಯವಂಶʼ ತನ್ವಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿದೆ. ಸಂಚಿಕೆ ನಿರ್ದೇಶನ: ಪ್ರಕಾಶ್ ಮುಚ್ಚಳಗುಡ್ಡ, ಛಾಯಾಗ್ರಹಣ: ಶಿವರಾಜು ಎಂ.ಆರ್ ಅವರದು.
ʻಸೂರ್ಯವಂಶʼ ಧಾರಾವಾಹಿ ಮಾರ್ಚ್ 11 ರಿಂದ ಸೋಮ-ಶನಿವಾರ ರಾತ್ರಿ 8 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
