• March 16, 2026

ಸ್ಯಾಂಡಲ್ ವುಡ್ ಹಿರಿಯ ನಿರ್ಮಾಪಕ ನರ್ಗೀಸ್ ಬಾಬು ನಿಧನ

ಸ್ಯಾಂಡಲ್ ವುಡ್ ನ ಖ್ಯಾತ ನಿರ್ಮಾಪಕ ನರ್ಗೀಸ್ ಬಾಬು ನಿನ್ನೆ ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ನರ್ಗೀಸ್ ಅವರು ಅದಕ್ಕಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ನಾಲ್ಕು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ನರ್ಗೀಸ್ ಬಾಬು ಸಕ್ರಿಯರಾಗಿದ್ದರು. ಡಿಸ್ಟ್ರಿಬ್ಯೂಟರ್‌, ಪ್ರೊಡಕ್ಷನ್ ಕಂಟ್ರೋಲರ್, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್, ಪ್ರೊಡ್ಯೂಸರ್ ಆಗಿ ಕನ್ನಡ ಸಿನಿಮಾರಂಗದಲ್ಲಿ ನರ್ಗೀಸ್ ಬಾಬು ಗುರುತಿಸಿಕೊಂಡಿದ್ದರು. 2014ರಲ್ಲಿ ರಿಲೀಸ್ ಆದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ರಮ್ಯಾ ನಟನೆಯ ಆರ್ಯನ್ ಸಿನಿಮಾಗೆ ನರ್ಗೀಸ್ ಬಾಬು ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿದ್ದರು. ‘ನರ್ಗೀಸ್ ಎಂಟರ್‌ಪ್ರೈಸಸ್’, ಹಾಗೂ ‘ಬಾಬು ಫಿಲ್ಮ್ಸ್’ ಮೂಲಕ ನರ್ಗೀಸ್ ಬಾಬು ‘ಸುಂದರ ಪುರುಷ’, ‘ಯಾರಿಗೆ ಬೇಡ ದುಡ್ಡು’, ‘ಧನ್ ಧನಾ ಧನ್’, ಸೇರಿದಂತೆ ಇನ್ನೂ ಕೆಲ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ನರ್ಗೀಸ್ ಬಾಬು ಪುತ್ರ ಕಮರ್ ಕೂಡ ಸ್ಯಾಂಡಲ್ ವುಡ್ ನಲ್ಲಿ ತೊಡಗಿಕೊಂಡಿದ್ದಾರೆ. ‘ಕಮರ್ ಫಿಲ್ಮ್ ಫ್ಯಾಕ್ಟರಿ’ ಮೂಲಕ ಚಿತ್ರ ನಿರ್ಮಾಣ ಹಾಗೂ ರಿಯಾಲಿಟಿ ಟಿವಿ ಶೋಗಳನ್ನು ನಡೆಸಿಕೊಡುತ್ತಿದ್ದಾರೆ. ಸುಮಾರು 40 ವರ್ಷಗಳಿಂದ ಕನ್ನಡ ಚಿತ್ರರಂಗದ ಜೊತೆ ಉತ್ತಮ ನಂಟು ಹೊಂದಿದ್ದ ನರ್ಗೀಸ್ ನಿಧನಕ್ಕೆ ಸ್ಯಾಂಡಲ್ ವುಡ್ ಕಂಬನಿ ಮಿಡಿದಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now