• January 1, 2026

ʻನೇತ್ರಾವತಿʼ ಧಾರವಾಹಿಯ 500 ಸಂಚಿಕೆ ಹಿನ್ನೆಲೆ: ಪುನೀತ್‌ ಪುಣ್ಯಭೂಮಿಗೆ ಪೂಜೆ

ಉದಯ ಟಿ.ವಿಯಲ್ಲಿ ಪ್ರಸಾರವಾಗುತ್ತಿರುವ ʻನೇತ್ರಾವತಿʼ ಧಾರಾವಾಹಿ ತಂಡದ ಸದಸ್ಯರು ಇತ್ತೀಚೆಗೆ ಕಂಠೀರವ ಸ್ಟೂಡಿಯೋಗೆ ಭೇಟಿ ನೀಡಿ ಕರ್ನಾಟಕ ರತ್ನ ಪುನೀತ್‌ರಾಜ್‌ಕುಮಾರ್‌ ಪುಣ್ಯಭೂಮಿಗೆ ಪೂಜೆ ಸಲ್ಲಿಸಿದರು. ಧಾರಾವಾಹಿಯ ಕಲಾವಿದರಾದ ಅಂಜಲಿ, ದುರ್ಗಾಶ್ರೀ, ಮಹೇಶ್‌, ಹೇಮಾ ನಾಡಿಗ್‌, ದೀಪಿಕಾ, ಸಚಿನ್‌, ಪಲ್ಲವಿ, ಮೋನಿಕಾ, ಮಾಲತಿ ಮೈಸೂರು, ಯತೀಶ್, ನಿರ್ದೇಶಕ ಸಂತೋಷ್‌ ಗೌಡ, ಛಾಯಾಗ್ರಾಹಕ ದಯಾಕರ್, ಸಂಕಲನಕಾರ ಗುರುಮೂರ್ತಿ ಹೆಗಡೆ ಮುಂತಾದವರು ಸಮಾಧಿಗೆ ಹೂ ಹಣ್ಣು, ಹಾರ ಅರ್ಪಿಸಿ ಪುನೀತ್‌ ಪುಣ್ಯಸ್ಮರಣೆ ಮಾಡಿಕೊಂಡರು. ಎಲ್ಲರೂ ಪುನೀತ್‌ ಚಿತ್ರವಿರುವ ಷರ್ಟ್‌ ಧರಿಸಿ ಅಭಿಮಾನ ಮೆರೆದರು. ನಂತರ ಅನಾಥಾಶ್ರಮದ ಮಕ್ಕಳಿಗೆ ಪುನೀತ್‌ ಹೆಸರಿನಲ್ಲಿ ಅನ್ನದಾನ ಮಾಡಲಾಯಿತು. ಇಷ್ಟೇ ಅಲ್ಲ, ಮಕ್ಕಳಿಗಾಗಿ ಪುನೀತ್‌ ನಟನೆಯ ಕೊನೆಯ ಚಿತ್ರ ʻಗಂಧದ ಗುಡಿʼ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ʻನೇತ್ರಾವತಿʼ ಧಾರಾವಾಹಿಯನ್ನು ಪುನೀತ್‌ ಅವರ ಕುಟುಂಬದ ನಿರ್ಮಾಣ ಸಂಸ್ಥೆ ಪೂರ್ಣಿಮಾ ಎಂಟರ್‌ಪ್ರೈಸಸ್‌  ನಿರ್ಮಿಸುತ್ತಿದೆ ಎನ್ನುವುದು ಗಮನಾರ್ಹ. ನೇತ್ರಾವತಿ ೫೦೦ : ಇದೇ ಋತುವಿನಲ್ಲಿ ʻನೇತ್ರಾವತಿʼ ಧಾರಾವಾಹಿ ೫೦೦ ಸಂಚಿಕೆಯ ಗಡಿ ದಾಟಿರುವುದು ಇನ್ನೊಂದು ವಿಶೇಷ. ನಾಯಕಿ ನೇತ್ರಾ ಒರಟು ನಾಯಕ  ಸಮುದ್ರನನ್ನು ಈಗ ಮೃದು ಮನಸ್ಸಿನ ಲವರ್‌ಬಾಯ್‌ ಮಾಡಿದ್ದಾಳೆ. ಇನ್ನು ಅವಳ ಮುಂದೆ ಇರುವ ಚಾಲೆಂಜ್‌ ಸಮುದ್ರನ ಮಲತಾಯಿ ಅಂದರೆ ತ್ರಿಶಲಾ ದೇವಿಯ ಮುಖವಾಡ ಕಳಚಿ ಅವಳ ಅಸಲಿ ಮುಖವನ್ನು ಲೋಕಕ್ಕೆ ತೋರಿಸುವುದು. ಅದಕ್ಕಾಗಿ ನೇತ್ರಾ  ಬ್ಲಾಕ್‌ವಾರ್‌ ಕೂಡ ಶುರು ಮಾಡಿದ್ದಾಳೆ. ಇದೇ ಮೊದಲ ಬಾರಿಗೆ, ಕಾಲಾಂತಕ ಧಿರಿಸು ತೊಟ್ಟು, ಬೈಕ್‌ ಓಡಿಸುತ್ತ ತನ್ನ ತಂತ್ರ ಪ್ರತಿತಂತ್ರಗಳಿಂದ ತ್ರಿಶಲಾಳನ್ನು ಕಂಗೆಡಿಸುತ್ತಿದ್ದಾಳೆ. ಮತ್ತೊಂದಡೆ ನೇತ್ರಾವತಿಯ ಅಕ್ಕ ನರ್ಮದಳನ್ನು ಸಮುದ್ರ ತಮ್ಮ ವಿಕ್ಕಿ ಟಾರ್ಗೆಟ್‌ ಮಾಡಿದ್ದಾನೆ. ತನ್ನ ತಪ್ಪು ಮುಚ್ಚಿಕೊಳ್ಳಲು ಅವಳನ್ನು ಸಾಯಿಸಲು ಮುಂದಾಗಿದ್ದಾನೆ. ಕಣ್ಣ ಮುಂದೆ ಇರುವ ತ್ರಿಶಲಾ ಹಾಗೂ ಮರೆಯಲ್ಲಿ ನಿಂತು ತಂತ್ರ ಮಾಡುತ್ತಿರುವ ವಿಕ್ಕಿನ ನೇತ್ರಾ ಹೇಗೆ ಸೆದೆ ಬಡೆಯುತ್ತಾಳೆ ಎನ್ನುವುದು ಕುತೂಹಲಕರ ಘಟ್ಟ. ʼನೇತ್ರಾವತಿʼ ಸೋಮವಾರದಿಂದ – ಶನಿವಾರದವರೆಗೆ ಸಂಜೆ ೭:೩೦ ಕ್ಕೆ ಉದಯ ಟಿ.ವಿಯಲ್ಲಿ ಪ್ರಸಾರವಾಗುತ್ತಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now