• March 14, 2026

ನನಸಾಗಲೇ ಇಲ್ಲ ಮಂಡ್ಯ ರವಿಯ ಅದೊಂದು ಕನಸು: ದುರದೃಷ್ಟ ಎಂದು ಭಾವುಕರಾಗಿದ್ದ ಕಲಾವಿದ

ಕನ್ನಡ ಕಿರುತೆರೆಯ ಖ್ಯಾತ ಕಲಾವಿದ, ಟಿ ಎನ್ ಸೀತಾರಾಮ್ ನಿರ್ದೇಶನದ ಮಗಳು ಜಾನಕಿ ಧಾರಾವಾಹಿಯ ಚಂದು ಭಾರ್ಗಿ ಖ್ಯಾತಿಯ ನಟ ಮಂಡ್ಯ ರವಿ ನಿನ್ನೆ ಸಂಜೆ 6.30ರ ಸುಮಾರಿಗೆ ನಿಧನರಾಗಿದ್ದಾರೆ. ಚಂದು ನಿಧನದ ಕುರಿತು ಬಿಜಿಎಸ್ ಆಸ್ಪತ್ರೆ ವೈದ್ಯರು ಅಧಿಕೃತ ಘೋಷಣೆ ಮಾಡಿದ್ದಾರೆ. ಕಿಡ್ನಿ ಸಮಸ್ಯೆ ಹಾಗೂ ಜಾಂಡೀಸ್ ನಿಂದ ಬಳಲುತ್ತಿದ್ದ ಮಂಡ್ಯ ರವಿ ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದು ರವಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ನಿಧನರಾಗಿದ್ದಾರೆ. ರವಿ ನಿಧನದ ಕುರಿತು ಪೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿರುವ ನಿರ್ದೇಶಕ ಸೀತಾರಾಮ್, “ಮಗಳು ಜಾನಕಿಯ ‘ಚಂದು ಭಾರ್ಗಿ’ ರವಿ ಅಸ್ತಂಗತ. ಇನ್ನೂ 42.. ನಾಲ್ಕು ಜನ್ಮಕ್ಕಾಗುವಷ್ಟು ಪ್ರತಿಭೆ..ಅತ್ಯಂತ ಆಘಾತಕಾರಿ” ಎಂದು ಬರೆದಿದ್ದಾರೆ. ಸಿನಿಮಾದಲ್ಲಿ ನಟಿಸಬೇಕು ಎಂದು ಗಾಂಧಿನಗರಕ್ಕೆ ಬಂದಿದ್ದ ರವಿ ಅವರಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ನಟಿಸಬೇಕು ಅನ್ನೋ ಕನಸಿತ್ತು. ಆದರೆ ಪುನೀತ್ ಅವರ ಹಠತ್ ನಿಧನದಿಂದ ಅದು ಸಾಧ್ಯವಾಗಲೇ ಇಲ್ಲ. ಪುನೀತ್ ನಿಧನದ ಸಂದರ್ಭದಲ್ಲಿ ಭಾವುಕರಾಗಿ ಮಾತನಾಡಿದ್ದ ರವಿ, ‘’ಪುನೀತ್ ಸರ್ ಜೊತೆಗೆ ನಟಿಸಬೇಕೆಂಬ ಮಹದಾಸೆ ಇತ್ತು. ಆದರೆ, ನನ್ನ ದುರದೃಷ್ಟ ಆ ಅವಕಾಶ ಸಿಗಲೇ ಇಲ್ಲ’’ ಎಂದಿದ್ದರು. ಬಾಲ್ಯದಿಂದಲೇ ನಾಟಕಗಳಲ್ಲಿ ಅಭಿನಯಿಸುತ್ತ ಬಣ್ಣದ ಬದುಕಿನತ್ತ ಒಲವು ಹೊಂದಿದ್ದ ರವಿ ಪ್ರಸಾದ್ ಬಳಿಕ ಧಾರವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸುತ್ತ ಖ್ಯಾತಿ ಘಳಿಸಿದರು. ಎಂಎ ಇಂಗ್ಲೀಷ್ ಹಾಗೂ ಎಲ್ ಎಲ್ ಬಿ ಓದಿದ್ದ ರವಿ 1996ರಲ್ಲಿ ಜನದನಿ ಹವ್ಯಾಸಿ ನಾಟಕ ತಂಡ ಸೇರಿದರು. ಅಲ್ಲಿಂದ ಟಿ ಎಸ್ ನಾಗಾಭರಣ ನಿರ್ದೇಶನದ ಮಹಾಮಾಯಿ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟರು. ಮಿಂಚು ಧಾರಾವಾಹಿ ರವಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಬಳಿಕ ಮುಕ್ತಮುಕ್ತ, ಚಿತ್ರಲೇಖ, ಯಶೋಧೆ, ವರಲಕ್ಷ್ಮಿ ಸ್ಟೋರ್ಸ್  ಸೇರಿದಂತೆ ಸಾಕಷ್ಟು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಪ್ರಸಾರವಾದ ಮಗಳು ಜಾನಕಿ ಧಾರಾವಾಹಿಯ ಚಂದು ಭಾರ್ಗಿ ಪಾತ್ರದ ಮೂಲಕ ರವಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ಅಲ್ಲದೇ, ಕಾಫಿತೋಟ ಸೇರಿದಂತೆ ಹಲವು ಸಿನಿಮಾಗಳಲ್ಲೂ ಮಂಡ್ಯ ರವಿ ನಟಿಸಿದ್ದಾರೆ. ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕ್ರೈಂ ಫೈಲ್ ಕಾರ್ಯಕ್ರಮವನ್ನು ರವಿಪ್ರಸಾದ್ ನಿರೂಪಣೆ ಮಾಡಿದ್ದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now