ಸೆಂಟ್ರಲ್ ವಿಸ್ತಾದಲ್ಲಿ ನಿರ್ಮಾಣ ಮಾಡಲಾಗಿರುವ ಹೊಸ ಸಂಸತ್ ಭವನವು ದೇಶದ ಜನರ ನಂಬಿಕೆ, ನಿರೀಕ್ಷೆಗಳಿಂದ ತುಂಬಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ನವದೆಹಲಿ: ಪ್ರಜಾಪ್ರಭುತ್ವದ ದೇಗುಲ ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಲೋಕಾರ್ಪಣೆ ಮಾಡಿ, ‘ಇದು ಭರವಸೆ ಮತ್ತು ದೇಶದ ಸಬಲೀಕರಣದ ತೊಟ್ಟಿಲಾಗಲಿ’ ಎಂದು ಆಶಿಸಿದ್ದಾರೆ.
ಭಾರತದ ಸಂಸತ್ತಿನ ಹೊಸ ಕಟ್ಟಡದ ಉದ್ಘಾಟನೆಯ ಬಳಿಕ ಟ್ವೀಟ್ ಮಾಡಿರುವ ಪ್ರಧಾನಿ, ನಮ್ಮ ಹೃದಯ ಮತ್ತು ಮನಸ್ಸು ಹೆಮ್ಮೆ, ಭರವಸೆ ಮತ್ತು ನಿರೀಕ್ಷೆಗಳಿಂದ ತುಂಬಿದೆ. ಈ ಭವ್ಯ ಕಟ್ಟಡವು ಸಬಲೀಕರಣದ ತೊಟ್ಟಿಲಾಗಲಿದೆ. ಕನಸುಗಳನ್ನು ಹೊತ್ತಿಸುವ ಮತ್ತು ಅವುಗಳನ್ನು ಪೂರೈಸುವ ಸಾಧನವಾಗಲಿ. ಇದು ನಮ್ಮ ಮಹಾನ್ ರಾಷ್ಟ್ರವನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯಲಿ ಎಂದು ಆಶಿಸಿ, ಸಮಾರಂಭದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.