ಬಾಲಿವುಡ್ ನಲ್ಲಿ ದಿನದಿಂದ ದಿನಕ್ಕೆ ಬಾಯ್ಕಾಟ್ ಬಿಸಿ ಜೋರಾಗಿಯೇ ಏರುತ್ತಿದೆ.ಈಗಾಗ್ಲೆ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಾಯ್ಕಾಟ್ ಗೆ ಬಲಿಯಾಗಿದ್ದು ಹೇಳ ಹೆಸರಿಲ್ಲದಂತೆ ಥಿಯೇಟರ್ ನಿಂದ ಎತ್ತಂಗಡಿ ಆಗಿದೆ. ಇದರ ಜೊತೆಗೆ ಸಾಕಷ್ಟು ನಿರೀಕ್ಷೆಯೊಂದಿಗೆ ತೆರೆಗೆ ಬಂದ ವಿಜಯ್ ದೇವರಕೊಂಡ ನಟನೆಯ ಲೈಗರ್ ಸಿನಿಮಾ ಮಕಾಡೆ ಮಲಗಿದೆ. ಈ ಮಧ್ಯೆ ರಣಬೀರ್ ಹಾಗೂ ಆಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರಕ್ಕೂ ಬಾಯ್ಕಾಟ್ ಬಿಸಿ ತಟ್ಟಿದೆ.
ರಣಬೀರ್ ಹಾಗೂ ಆಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಬಿಡುಗಡೆಗೆ ಸಿದ್ದವಾಗಿ ನಿಂತಿದೆ. ಹೀಗಾಗಿ ಆಲಿಯಾ ಹಾಗೂ ರಣಬೀರ್ ಚಿತ್ರದ ಪ್ರಮೋಷನ್ ಕೆಲಸಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಗರ್ಭಿಣಿಯಾಗಿರುವ ಆಲಿಯಾ ವಿರಾಮ ತೆಗೆದುಕೊಳ್ಳದೆ ಬ್ರಹ್ಮಾಸ್ತ್ರ ಸಿನಿಮಾದ ಪ್ರಮೋಷನ್ ನಲ್ಲಿ ತೊಡಗಿಕೊಂಡಿದ್ದಾರೆ.
ನಟ ರಣಬೀರ್ ಕಪೂರ್ ಕೂಡ ಸಾಕಷ್ಟು ರಾಜ್ಯಗಳನ್ನು ಸುತ್ತಿ ಸಿನಿಮಾದ ಪ್ರಮೋಷನ್ ನಲ್ಲಿ ತೊಡಗಿದ್ದಾರೆ. ಈ ಮಧ್ಯೆ ಸಾಕಷ್ಟು ವರ್ಷಗಳ ಹಿಂದೆ ರಣಬೀರ್ ನೀಡಿದ ಹೇಳಿಕೆಯೊಂದು ಬ್ರಹ್ಮಾಸ್ತ್ರ ಸಿನಿಮಾಗೆ ಮುಳುವಾಗಿದೆ. “ತಮ್ಮದು ಮಾಂಸಪ್ರಿಯ ಕುಟುಂಬ. ಗೋಮಾಂಸ ಸೇರಿದಂತೆ ನಾನಾ ರೀತಿಯ ನಾನ್ ವೆಜ್ ತಿನ್ನುತ್ತೇವೆ. ಅದರಲ್ಲೂ ನನಗೆ ಗೋಮಾಂಸ ಅಂದರೆ ಇಷ್ಟ ಎಂದು ರಣಬೀರ್ ಹೇಳಿಕೊಂಡಿದ್ದಾರೆ. ಅಂದು ರಣಬೀರ್ ಹೇಳಿದ ಈ ಮಾತೇ ಇಂದು ಅವರಿಗೆ ಮುಳುವಾಗಿದೆ.

ಕೋಟ್ಯಾಂತರ ಮಂದಿ ಗೋವನ್ನು ದೇವರೆಂದು ಪೂಜಿಸುತ್ತಾರೆ. ಹೀಗಾಗಿ ರಣಬೀರ್ ಹೇಳಿಕೆಯನ್ನು ಒಪ್ಪಲು ಯಾರು ಸಿದ್ದರಿಲ್ಲ. ಇದೇ ಕಾರಣಕ್ಕೆ ಬ್ರಹ್ಮಾಸ್ತ್ರ ಸಿನಿಮಾವನ್ನು ಬಾಯ್ಕಾಟ್ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ಇದು ಹತ್ತು ವರ್ಷಗಳ ಹಿಂದಿನ ವಿಡಿಯೋವಾಗಿದ್ದರೂ, ಆಗಿನ್ನೂ ಗೋಮಾಂಸ ನಿಷೇಧ ಇಲ್ಲದೇ ಇದ್ದರೂ ಈಗ ಆ ವಿಡಿಯೋವನ್ನು ವೈರಲ್ ಮಾಡಲಾಗುತ್ತಿದೆ. ಹಿಂದೂ ವಿರೋಧಿಗಳ ಸಿನಿಮಾವನ್ನು ನೋಡಬೇಡಿ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ, ಈ ಹಿಂದೆ ಆಲಿಯಾ ಭಟ್ ಆಡಿದ ಮಾತುಗಳು ಕೂಡ ಬ್ರಹ್ಮಾಸ್ತ್ರ ಸಿನಿಮಾಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.