ಕಳೆದ ಕೆಲ ವರ್ಷಗಳಿಂದ ಆನ್ ಲೈನ್ ಗೇಮ್ ಗೆ ಸಂಬಂಧಿಸಿದಂತೆ ಕಿಚ್ಚ ಸುದೀಪ್ ವಿರುದ್ಧ ಲೇಖಕ, ಧಾರ್ಮಿಕ ಚಿಂತಕ ಅಹೋರಾತ್ರ ಹಾಗೂ ಈತನ ಶಿಷ್ಯ ಚರಣ್ ಸಮರ ಸಾರುತ್ತಿದ್ದಾರೆ. ಇದೀಗ ಈ ಇಬ್ಬರು ಮೇಲೆ ಕ್ರಮ ತೆಗೆದುಕೊಳ್ಳುವಂತೆ ಸುದೀಪ್ ಪರವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಸಹಾಯಕ ಪೊಲೀಸ್ ಆಯುಕ್ತರು ಬೆಂಗಳೂರು ನಗರ ಇವರಿಗೆ ದೂರು ನೀಡಿದ್ದಾರೆ.
ಇತ್ತೀಚೆಗೆ ಚರಣ್ ಸೋಷಿಯಲ್ ಮೀಡಿಯಾದಲ್ಲಿ ಸುದೀಪ್ ಅವರನ್ನು ನಿಂದಿಸಿದ್ದರು. ಈ ವೇಳೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನೂ ಟಾರ್ಗೆಟ್ ಮಾಡಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡ ವಾಣಿಜ್ಯ ಮಂಡಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಭಾರತೀಯ ಚಲನಚಿತ್ರ ರಂಗದಲ್ಲಿ ಹೆಸರಾಂತ ಕಲಾವಿದ ಕಿಚ್ಚ ಸುದೀಪ್ ಎಂದೇ ಪ್ರಖ್ಯಾತರಾಗಿರುವ ಶ್ರೀ ಸುದೀಪ್ ಅವರ ವಿರುದ್ಧ ಅಹೋರಾತ್ರ ಮತ್ತು ಚರಣ್ ಎಂಬುವವರು ಸಾಮಾಜಿಕ ಜಾಲತಾಣಗಳ್ಲಲಿ ಅವಾಚ್ಯ, ಅವಹೇಳನಕಾರಿಯಾಗಿ ಪದಬಳಕೆ ಮಾಡುವ ಮೂಲಕ ಕನ್ನಡ ಚಿತ್ರರಂಗ ಹಾಗೂ ಸುದೀಪ್ ಅವರ ಘನತೆ, ಗೌರವಕ್ಕೆ ಚ್ಯುತಿ ತರುವಂತಹ ಹೇಳಿಕೆ ನೀಡಿರುವುದು ಬೇಸರ ಸಂಗತಿ. ಇಂತಹ ಹೇಳಿಕೆಗಳಿಂದ ಕನ್ನಡ ಚಿತ್ರರಂಗ ಹಾಗೂ ಕಲಾವಿದರ ಬಗ್ಗೆ ಸಾರ್ವಜನಿಕರಲ್ಲಿ ಇಲ್ಲಸಲ್ಲದ ಗೊಂದಲಗಳಿಗೆ ಎಡೆ ಮಾಡಿಕೊಟ್ಟಂತಾಗಿದೆ. ಆದ್ದರಿಂದ ತಾವು ದಯಮಾಡಿ ಅಹೋರಾತ್ರ ಮತ್ತು ಚರಣ್ ವಿರುದ್ಧ ಕಾನೂನು ಕ್ರಮ ಜರುಗಿಸಿ ಚಿತ್ರರಂಗದ ಹಾಗೂ ಕಲಾವಿದರ ಬೆಳವಣಿಗೆಗೆ ಯಾವುದೇ ರೀತಿಯ ಚ್ಯುತಿ ಬಾರದಂತೆ ಸಹಕರಿಬೇಕೆಂದು ಈ ಮೂಲಕ ತಮ್ಮಲ್ಲಿ ಕೋರಿಕೊಳ್ಳುತ್ತೇನೆ ಎಂದು ದೂರುನಲ್ಲಿ ಉಲ್ಲೇಖಿಸಲಾಗಿದೆ.
ಸುದೀಪ್ ಕನ್ನಡ ಚಿತ್ರರಂಗದಲ್ಲಿ ಸಾಧನೆ ಮಾಡಿದ ಮೇರು ನಟ. ಅವರ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ. ಕನ್ನಡ ಚಿತ್ರರಂಗದ ಯಾವ ನಟರ ಬಗ್ಗೆಯೂ ಈ ರೀತಿ ಮಾತನಾಡಬಾರದು. ಮುಂದೆ ಹೀಗೆ ಆಗಬಾರದು ಎಂಬ ಕಾರಣಕ್ಕೆ ಪೊಲೀಸರಿಗೆ ದೂರು ನೀಡಿದ್ದಾಗಿ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ ಮ ಹರೀಶ್ ಹೇಳಿದ್ದಾರೆ.
ಕೆಲ ವರ್ಷಗಳ ಹಿಂದೆ ಕಿಚ್ಚ ಸುದೀಪ್ ಆನ್ ಲೈನ್ ಗೇಮ್ ರಮ್ಮಿಯ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದರು. ಈ ಜಾಹಿರಾತು ನೋಡಿ ಸಾಕಷ್ಟು ಜನ ಆನ್ ಲೈನ್ ಗೇಮ್ ಹುಚ್ಚಿಗೆ ಬಿಳುತ್ತಾರೆ. ಇದರಿಂದ ಮನೆ ಮಟ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಕಾರಣಕ್ಕೆ ಅಹೋರಾತ್ರ ಈ ಜಾಹೀರಾತಿನ ವಿರುದ್ಧ ತಿರುಗಿ ಬಿದಿದ್ದರು.