ದೈವಾರಾಧನೆ ಹಿಂದೂ ಸಂಸ್ಕೃತಿಯೇ ಅಲ್ಲ ಎಂದು ಕಾಂತಾರ ಸಿನಿಮಾದ ಬಗ್ಗೆ ವಿವಾದ ಹುಟ್ಟು ಹಾಕಿದ ನಟ ಚೇತನ್ ವಿರುದ್ದ ಸಾಕಷ್ಟು ಮಂದಿ ಗರಂ ಆಗಿದ್ದಾರೆ. ಇದೀಗ ಕಾಂತಾರದ ‘ಗುರುವ’ ಪಾತ್ರಧಾರಿ ಸ್ವರಾಜ್ ಶೆಟ್ಟಿ, ನಟ ಚೇತನ್ ಗೆ ಸವಾಲು ಹಾಕಿದ್ದಾರೆ. ತಾಕತ್ತಿದ್ರೆ ಮಂಗಳೂರಿಗೆ ಬಂದು ದೈವಾರಾಧನೆ ಬಗ್ಗೆ ಪ್ರಶ್ನೆ ಮಾಡಲಿ ಎಂದಿದ್ದಾರೆ.
ಹಿಂದೂ ಸಂಸ್ಕೃತಿ ಅಲ್ಲ ಅಂತ ಹೇಳಲು ಅದು ಯಾವಾಗ ಬಂದಿರೋದು ಅಂತ ಯಾರಿಗಾದ್ರೂ ಗೊತ್ತಿದ್ಯಾ. ದೈವಾರಾಧನೆಯನ್ನ ತುಳುನಾಡಿಗರು ಮಾಡ್ತಾ ಇದಾರೆ. ಆದರೆ ಚೇತನ್ ರ ಹೇಳಿಕೆ ನಮ್ಮ ನಂಬಿಕೆಗೆ ಧಕ್ಕೆ ತರುವಂತಿದೆ. ಭೂತಾರಾಧನೆ ಮತ್ತು ಹಿಂದುತ್ವದ ಸಂಬಂಧದ ಬಗ್ಗೆ ಮಾತನಾಡಬಾರದು. ಅದರ ಬಗ್ಗೆ ನಿಮಗೆ ಗೊತ್ತಿದ್ಯಾ? ನಿಮ್ಮಲ್ಲಿ ಸಾಕ್ಷ್ಯ ಏನಿದೆ? ಎಂದು ಪ್ರಶ್ನೆ ಮಾಡಿದರು.
ನಮ್ಮ ಪೂರ್ವಜರು ಹೇಳಿದ್ದನ್ನು ನಾವು ಮಾಡಿಕೊಂಡು ಬರ್ತಾ ಇದೀವಿ. ದೈವಾರಾಧನೆ ಮತ್ತು ಕಾಂತಾರದ ವಿಷಯ ಬೇಡ, ಸಿನಿಮಾ ಸಿನಿಮಾವಾಗಿಯೇ ಇರಲಿ. ಅವರು ನಟರಾಗಿ ಸಿನಿಮಾವಾಗಿಯೇ ಅದನ್ನ ನೋಡಿ ಖುಷಿ ಪಡಲಿ. ಅದು ಬಿಟ್ಟು ಬೇಳೆ ಬೇಯಿಸಿ ಕೊಳ್ಳುವ ಕೆಲಸ ಬೇಡ ಎಂದಿ ಸ್ವರಾಜ್ ಶೆಟ್ಟಿ ಹೇಳಿದ್ದಾರೆ.
ದೈವಾರಾಧನೆ ಇವತ್ತು ನಿನ್ನೆಯದಲ್ಲ, ಕಾಂತಾರ ನೋಡಿದ ನಂತರವೇ ಅವರಿಗೆ ಗೊತ್ತಾಗಿದೆ. ಈಗ ಅವರು ನಮ್ಮ ಚಿತ್ರಕ್ಕೆ ಪ್ರಚಾರದ ಕೆಲಸ ಮಾಡ್ತಿದ್ದಾರೆ. ಆದರೆ ಇವರ ಪಬ್ಲಿಸಿಟಿ ನಮಗೆ ಬೇಕಾಗಿಲ್ಲ. ಆದರೂ ಅವರಿಗೊಂದು ದೊಡ್ಡ ಧನ್ಯವಾದ ಎಂದಿದ್ದಾರೆ.
ಭೂತಾರಾಧನೆ, ದೈವಾರಾಧನೆ ಓದಿ ಆಮೇಲೆ ಮಾತನಾಡಲಿ ಎಂದ ಅವರು, ದೈವಕ್ಕೆ ಅವಮಾನ ಮಾಡಿದ್ರೆ, ಅದಕ್ಕೆ ತಕ್ಕ ಶಿಕ್ಷೆ ಆಗುತ್ತದೆ. ಅವರು ದೈವದ ಬಗ್ಗೆ ತಿಳಿಯಬೇಕಿದ್ರೆ ತುಳುನಾಡಿಗೆ ಬನ್ನಿ, ಅಲ್ಲಿ ತಪ್ಪು ಮಾಡಿರುವ ಬಗ್ಗೆ ಕ್ಷಮೆ ಕೇಳಿದ್ರೆ ಅವರಿಗೆ ಒಳ್ಳೆ ಬುದ್ಧಿ ದೈವಗಳು ಕೊಡುತ್ತಾರೆ ಎಂದರು.